ರೂತಳು
11ನ್ಯಾಯಸ್ಥಾಪಕರು ಇಸ್ರಾಯೇಲನ್ನು ಆಳುತ್ತಿದ್ದ ಸಮಯದಲ್ಲಿ, ಆ ದೇಶದಲ್ಲಿ ಬರಗಾಲ ಇತ್ತು. ಇಸ್ರಾಯೇಲ್ ದೇಶದ ಯೆಹೂದ ಸೀಮೆಯಲ್ಲಿದ್ದ ಬೇತ್ಲೆಹೇಮ್ ಎಂಬ ಊರಿನವನಾದ ಒಬ್ಬ ಮನುಷ್ಯನು ಅದನ್ನು ಬಿಟ್ಟು ಮೋವಾಬ್ ದೇಶದಲ್ಲಿ ಸ್ವಲ್ಪ ಕಾಲ ವಾಸಿಸಲು ಹೋದನು. ಅವನ ಹೆಂಡತಿಯು ಮತ್ತು ಅವನ ಇಬ್ಬರು ಗಂಡು ಮಕ್ಕಳು ಅವನ ಜೊತೆಯಲ್ಲಿ ಹೋದರು. 2ಆ ಮನುಷ್ಯನ ಹೆಸರು ಎಲೀಮೆಲೆಕನು ಮತ್ತು ಅವನ ಹೆಂಡತಿಯ ಹೆಸರು ನವೊಮಿ. ಅವನ ಇಬ್ಬರು ಪುತ್ರರ ಹೆಸರುಗಳು ಮಹ್ಲೋನ್ ಮತ್ತು ಕಿಲ್ಯೋನ್ ಎಂಬದಾಗಿದ್ದವು. ಅವರು ಯೆಹೂದ ದೇಶದಲ್ಲಿರುವ ಬೇತ್ಲೆಹೇಮಿನ ಎಫ್ರಾತ ಗೋತ್ರದವರಾಗಿದ್ದರು. ಅವರು ಮೊವಾಬ್ ಸೀಮೆಗೆ ಬಂದರು ಮತ್ತು ಅಲ್ಲಿ ವಾಸಿಸಿದರು. 3ಅನಂತರ ನವೊಮಿಯ ಗಂಡನಾದ ಎಲೀಮೆಲೆಕನು ಸತ್ತುಹೋದನು, ಮತ್ತು ನವೊಮಿಯ ಇಬ್ಬರು ಗಂಡು ಮಕ್ಕಳು ಮಾತ್ರ ಅವಳ ಜೊತೆಯಲ್ಲಿ ಇದ್ದರು. 4ಗಂಡು ಮಕ್ಕಳು ಮೋವಾಬಿನ ಸ್ತ್ರೀಯರನ್ನು ಮದುವೆಯಾದರು. ಒಬ್ಬ ಸ್ತ್ರೀಯ ಹೆಸರು ಒರ್ಫಾ, ಮತ್ತು ಮತ್ತೊಬ್ಬ ಸ್ತ್ರೀಯ ಹೆಸರು ರೂತಳು. ಆದರೆ ಅವರು ಆ ಪ್ರದೇಶದಲ್ಲಿ ಸುಮಾರು ಹತ್ತು ವರ್ಷಗಳವರೆಗೆ ವಾಸಿಸಿದ ನಂತರ, 5ಮಹ್ಲೋನ್ ಮತ್ತು ಕಿಲ್ಯೋನ್ ಸಹ ಸತ್ತುಹೋದರು. ಆದ್ದರಿಂದ ನವೊಮಿಯು ತನ್ನ ಗಂಡು ಮಕ್ಕಳು ಮತ್ತು ಗಂಡನು ಇಲ್ಲದೆ ಒಬ್ಬಳೇ ಉಳಿದಳು. 6ಒಂದು ದಿನ ನವೊಮಿಯು ಇನ್ನೂ ಮೋವಾಬಿನಲ್ಲಿ ಇರುವಾಗಲೇ, ಯೆಹೋವನು ತನ್ನ ಜನರಿಗೆ ಸಹಾಯ ಮಾಡಿದ್ದಾನೆ ಮತ್ತು ಈಗ ಇಸ್ರಾಯೇಲಿನಲ್ಲಿ ಆಹಾರವು ಸಮೃದ್ದಿಯಾಗಿದೆ ಎಂದು ಯಾರೋ ಹೇಳುವುದನ್ನು ಕೇಳಿಸಿಕೊಂಡಳು. ಆದ್ದರಿಂದ ಅವಳು ತನ್ನ ಇಬ್ಬರು ಸೊಸೆಯಂದಿರ ಜೊತೆಗೆ ಹಿಂತಿರುಗಿ ಬೇತ್ಲೆಹೇಮಿಗೆ ಹೋಗಲು ಸಿದ್ದಳಾದಳು. 7ಅವರು ತಾವು ವಾಸಿಸುತ್ತಿದ್ದ ಸ್ಥಳವನ್ನು ಬಿಟ್ಟರು ಮತ್ತು ಯೆಹೂದ ದೇಶಕ್ಕೆ ಹಿಂತಿರುಗಿ ಪ್ರಯಾಣ ಮಾಡಲು ಪ್ರಾರಂಭಿಸಿದರು. 8ಅವರು ನಡೆದುಕೊಂಡು ಹೋಗುತ್ತಿರುವಾಗ, ನವೊಮಿಯು ತನ್ನ ಇಬ್ಬರು ಸೊಸೆಯಂದಿರಿಗೆ ಹೇಳಿದ್ದೇನಂದರೆ, “ನಿಮ್ಮಲ್ಲಿ ಪ್ರತಿಯೊಬ್ಬಳು ತಿರಿಗಿಕೊಳ್ಳಿರಿ ಮತ್ತು ನಿಮ್ಮ ತಾಯಿಯ ಮನೆಗೆ ಹಿಂದಿರುಗಿ ಹೋಗಿರಿ. ನೀವು ಸತ್ತು ಹೋದ ನಮ್ಮ ಗಂಡಂದಿರಿಗೆ ಮತ್ತು ನನಗೆ ನಂಬಿಗಸ್ತರಾಗಿದ್ದಂತೆಯೇ ಯೆಹೋವನು ನಿಮಗೂ ನಂಬಿಗಸ್ತನಾಗಿರಲಿ ಎಂದು ನಾನು ಆತನನ್ನು ಬೇಡಿಕೊಳ್ಳುತ್ತೇನೆ. 9ನೀವು ಸುರಕ್ಷಿತವಾದ ಮನೆಯನ್ನು ಹೊಂದಿಕೊಳ್ಳುವಂತೆ ನಿಮ್ಮಲ್ಲಿ ಪ್ರತಿಯೊಬ್ಬಳಿಗೂ ಮತ್ತೊಬ್ಬ ಗಂಡನು ದೊರಕುವಂತೆ ಅನುವು ಮಾಡಿಕೊಡಲಿ ಎಂದು ನಾನು ಯೆಹೋವನನ್ನು ಬೇಡಿಕೊಳ್ಳುತ್ತೇನೆ.” ಅನಂತರ ಅವಳು ಅವರಲ್ಲಿ ಪ್ರತಿಯೊಬ್ಬಳಿಗೂ ಮುದ್ದಿಟ್ಟಳು, ಮತ್ತು ಅವರು ಜೋರಾಗಿ ಅತ್ತರು. 10ಅವರಲ್ಲಿ ಪ್ರತಿಯೊಬ್ಬಳು, “ಇಲ್ಲ! ನಾವು ನಿನ್ನ ಜೊತೆ ನಿನ್ನ ಸಂಬಂಧಿಕರ ಬಳಿಗೆ ಹಿಂದಿರುಗಿ ಬರುತ್ತೇವೆ” ಅಂದರು. 11ಆದರೆ ನವೊಮಿಯು ಹೇಳಿದ್ದೇನಂದರೆ, “ಇಲ್ಲ, ನನ್ನ ಪುತ್ರಿಯರೇ, ಮನೆಗೆ ಹಿಂತಿರುಗಿರಿ. ನೀವು ನನ್ನ ಜೊತೆ ಬರುವದಾದರೆ ಅದರಿಂದ ನಿಮಗೆ ಏನೂ ಒಳ್ಳೆಯದಾಗುವದಿಲ್ಲ! ನಿಮ್ಮ ಗಂಡಂದಿರು ಆಗುವಂತೆ ಹೆಚ್ಚು ಪುತ್ರರನ್ನು ಹೆರಲು ನನ್ನಿಂದ ಸಾಧ್ಯವಾಗುವುದಿಲ್ಲ. 12ನನ್ನ ಪುತ್ರಿಯರೇ, ನೀವು ಹಿಂತಿರುಗಿ ಹೋಗಿರಿ. ನಾನು ಮತ್ತೊಬ್ಬ ಗಂಡನನ್ನು ಹೊಂದುವುದಕ್ಕೆ ಕಾಲವು ಮಿಂಚಿಹೋಗಿದೆ. ಒಂದುವೇಳೆ ನಾನು ಮತ್ತೊಬ್ಬ ಗಂಡನನ್ನು ಹೊಂದಬೇಕೆಂದು ಯೋಚಿಸಿದರೂ, ಮತ್ತು ಇವತ್ತು ರಾತ್ರಿಯೇ ಮದುವೆ ಮಾಡಿಕೊಂಡು ಮತ್ತು ಹೆಚ್ಚು ಪುತ್ರರನ್ನು ಪಡೆದರೂ, 13ಅವರು ಬೆಳೆದು ದೊಡ್ಡವರಾಗುವ ತನಕ ನೀವು ಕಾಯುವುದಿಲ್ಲವಲ್ಲಾ! ಅಲ್ಲಿಯ ತನಕ ನೀವು ಮದುವೆಯಾಗದೆ ಹಾಗೆಯೇ ಇರಲಾಗುವುದಿಲ್ಲವಲ್ಲಾ! ಇಲ್ಲ, ನನ್ನ ಪುತ್ರಿಯರೇ! ಯೆಹೋವನು ನನ್ನನ್ನು ಬಾಧಿಸಿದ್ದಾನೆ, ನನ್ನ ಜೀವಿತವನ್ನು ತುಂಬಾ ಕಹಿಯಾಗಿ ಮಾಡಿದ್ದಾನೆ. ಆದರೆ ನಿಮ್ಮ ಜೀವಿತಗಳು ನನ್ನ ಜೀವಿತದ ಹಾಗೆ ಕಹಿಯಾಗಿರಬಾರದು.” 14ಆಗ ರೂತಳು ಮತ್ತು ಒರ್ಫಾಳು ಮತ್ತೆ ಜೋರಾಗಿ ಅತ್ತರು. ಒರ್ಫಾಳು ತನ್ನ ಅತ್ತೆಗೆ ಮುದ್ದಿಟ್ಟು ವಿದಾಯ ಹೇಳಿ ಹೊರಟು ಹೋದಳು, ಆದರೆ ರೂತಳು ನವೊಮಿಯ ಜೊತೆಯಲ್ಲಿ ಇದ್ದಳು. 15ನವೊಮಿಯು ಆಕೆಗೆ ಹೇಳಿದ್ದೇನಂದರೆ, “ನೋಡು! ನಿನ್ನ ಒರಗಿತ್ತಿಯು ತನ್ನ ಸಂಬಂಧಿಕರ ಬಳಿಗೆ ಮತ್ತು ತನ್ನ ದೇವರುಗಳ ಬಳಿಗೆ ತಿರುಗಿ ಹೋಗುತ್ತಿದ್ದಾಳೆ! ಅವಳ ಜೊತೆ ಹಿಂತಿರುಗಿ ಹೋಗು!” 16ಆದರೆ ರೂತಳು ಉತ್ತರವಾಗಿ ಹೇಳಿದ್ದೇನಂದರೆ, “ಇಲ್ಲ! ದಯಮಾಡಿ ನಾನು ನಿನ್ನನ್ನು ಹೋಗುವುದಕ್ಕೆ ಬಿಡುವಂತೆ ಆಗಲಿ ಅಥವಾ ನಾನು ಹಿಂತಿರುಗಿಕೊಂಡು ನಿನ್ನನ್ನು ಹಿಂಬಾಲಿಸುವುದನ್ನು ನಿಲ್ಲಿಸುವಂತೆ ಆಗಲಿ ಒತ್ತಾಯಿಸ ಬೇಡ! ನೀನು ಎಲ್ಲಿಗೆ ಹೋಗುತ್ತಿಯೋ, ಅಲ್ಲಿಗೆ ನಾನು ಬರುತ್ತೇನೆ. ನೀನು ಎಲ್ಲಿ ಇರುತ್ತಿಯೋ, ನಾನು ಅಲ್ಲಿಯೇ ಇರುತ್ತೇನೆ. ನಿನ್ನ ಸಂಬಂಧಿಕರು ನನ್ನ ಸಂಬಂಧಿಕರಾಗಿರುವರು, ಮತ್ತು ನೀನು ಆರಾಧಿಸುವ ದೇವರನ್ನು ನಾನು ಆರಾಧಿಸುವೆನು. 17ನೀನು ಎಲ್ಲಿ ಸಾಯುತ್ತಿಯೋ, ನಾನು ಅಲ್ಲಿಯೇ ಸಾಯುವೆನು ಮತ್ತು ಅವರು ನನ್ನನ್ನು ಅಲ್ಲಿಯೇ ಹೂಣಿಡುವರು. ಒಂದುವೇಳೆ ನಾನು ಸಾಯುವುದಕ್ಕಿಂತ ಮೊದಲು ನಿನ್ನನ್ನು ಬಿಟ್ಟು ಹೋದರೆ ಯೆಹೋವನು ನನ್ನನ್ನು ಕಠಿಣವಾಗಿ ಶಿಕ್ಷಿಸಲಿ.” 18ರೂತಳು ತನ್ನ ಜೊತೆ ಬರಲು ನಿರ್ಧರಿಸಿದ್ದಾಳೆಂದು ನವೊಮಿಯು ಅರಿತುಕೊಂಡಾಗ, ಅವಳು ಆಕೆಯನ್ನು ಹಿಂತಿರುಗಿ ಮನೆಗೆ ಹೋಗು ಎಂದು ಒತ್ತಾಯ ಮಾಡುವುದನ್ನು ನಿಲ್ಲಿಸಿದಳು. 19ಆದುದರಿಂದ ಆ ಇಬ್ಬರು ಸ್ತ್ರೀಯರು ಬೆತ್ಲೆಹೇಮ್ ಎಂಬ ಊರಿನ ವರೆಗೂ ಬರುವ ತನಕ ಅವರು ನಡೆದುಕೊಂಡು ಹೋದರು. ಅವರು ಅಲ್ಲಿಗೆ ತಲುಪಿದಾಗ, ಆ ಊರಿನಲ್ಲಿರುವ ಅನೇಕ ಜನರು ಅವರ ಬಗ್ಗೆ ಜೋರಾಗಿ ಕೂಗಲು ಪ್ರಾರಂಭಿಸಿದರು. ಆ ಊರಿನ ಸ್ತ್ರೀಯರು, “ಇವಳೇ ನವೂಮಿ ಎಂದು ನಂಬಲು ಆಗುತ್ತಿಲ್ಲ!” ಎಂದು ಗಟ್ಟಿಯಾಗಿ ಹೇಳಿದರು. 20ನವೊಮಿಯು ಅವರಿಗೆ ಹೇಳಿದ್ದೇನಂದರೆ, “ನೀವು ನನ್ನನ್ನು ನವೂಮಿ ಎಂದು ಕರೆಯಬೇಡಿರಿ, ಯಾಕೆಂದರೆ ಅದರ ಅರ್ಥ ‘ಮನೋಹರ.’ ಅದಕ್ಕೆ ಬದಲಾಗಿ ನನ್ನನ್ನು ಮಾರಾ ಎಂದು ಕರೆಯಿರಿ, ಯಾಕೆಂದರೆ ಅದರ ಅರ್ಥ ‘ಕಹಿ.’ ಸರ್ವಶಕ್ತನಾದ ದೇವರು ನನ್ನ ಜೀವನವನ್ನು ಬಹಳ ಕಹಿಯಾಗಿ ಮಾಡಿದ್ದಾನೆ. 21ನಾನು ಇಲ್ಲಿಂದ ಹೊರಟುಹೋಗುವಾಗ ನನಗೆ ಬೇಕಾದ ಎಲ್ಲವು ನನಗೆ ಇತ್ತು, ಆದರೆ ಯೆಹೋವನು ನನ್ನನ್ನು ಏನೂ ಇಲ್ಲದಂತೆ ತಿರಿಗಿ ಬರಮಾಡಿದ್ದಾನೆ. ನನ್ನನ್ನು ನವೂಮಿ ಎಂದು ಕರೆಯಬೇಡಿರಿ. ಯೆಹೋವನು ನನ್ನನ್ನು ವಿರೋಧಿಸಿದ್ದಾನೆ. ಸರ್ವಶಕ್ತನಾದ ದೇವರು ನನಗೆ ಕೇಡು ಮಾಡಿದ್ದಾನೆ.” 22ಆದ್ದರಿಂದ ಹೀಗೆ ನವೊಮಿಯು ಮೋವಾಬಿನ ಸ್ತ್ರೀಯಾದ ತನ್ನ ಸೊಸೆ ರೂತಳ ಜೊತೆ ಹಿಂತಿರುಗಿ ಮನೆಗೆ ಬಂದಳು. ಅವರು ಬೇತ್ಲೆಹೇಮಿಗೆ ಬಂದಾಗ ಆಗತಾನೇ ಜವೆಗೋದಿಯ ಸುಗ್ಗಿಯು ಪ್ರಾರಂಭವಾಗಿತ್ತು.
21ನವೊಮಿಯ ತೀರಿಹೋದ ಗಂಡನ ಸಂಬಂಧಿಕನಾಗಿದ್ದ ಒಬ್ಬ ಮನುಷ್ಯನು ಅಲ್ಲಿ ಇದ್ದನು. ಅವನು ಶ್ರೀಮಂತನು ಮತ್ತು ಪ್ರಮುಖನು, ಮತ್ತು ಎಲೀಮೆಲೆಕನ ಗೋತ್ರದ ಸದಸ್ಯನು ಆಗಿದ್ದನು. ಅವನ ಹೆಸರು ಬೋವಜ ಎಂದಾಗಿತ್ತು. 2(ಮೋವಾಬಿನ ಸ್ತ್ರೀಯಾದ) ರೂತಳು ನವೊಮಿಗೆ, “ನಾನು ಹೊಲಗಳಿಗೆ ಹೋಗಿ ಕೊಯ್ಯುವವರು ಬಿಟ್ಟುಹೋದ ಕಾಳುಗಳನ್ನು ಆಯ್ದುಕೊಂಡು ಬರಲು ಬಿಡು. ನನಗೆ ಅನುಮತಿ ಕೊಡುವ ಕೊಯ್ಯುವವರ ಹಿಂದೆ ನಾನು ಹೋಗುವೆನು” ಅಂದಳು. ನವೊಮಿಯು “ಹೋಗು ನನ್ನ ಮಗಳೇ” ಎಂದು ಉತ್ತರಿಸಿದಳು. 3ಆದ್ದರಿಂದ ರೂತಳು ಹೋದಳು. ಅವಳು ಹೊಲಗಳಿಗೆ ಹೋದಾಗ, ಅವಳು ಕೊಯ್ಯುವವರ ಹಿಂದೆ ಹೋದಳು ಮತ್ತು ಕಾಳುಗಳನ್ನು ಆಯ್ದುಕೊಂಡಳು. ಆ ಹೊಲದ ಭಾಗವು ಎಲೀಮೆಲೆಕನ ಸಂಬಂಧಿಕನಾದ ಬೋವಜನಿಗೆ ಸೇರಿದ್ದಂಥದ್ದು ಆಗಿತ್ತು. 4ಆಗ ಬೋವಜನು ಊರಿನಿಂದ ತಿರಿಗಿ ಬಂದನು. ಅವನು ಕೊಯ್ಯುವವರನ್ನು ವಂದಿಸಿ, “ಯೆಹೋವನು ನಿಮ್ಮ ಜೊತೆಯಿರಲಿ!” ಅಂದನು. ಅವರು, “ಯೆಹೋವನು ನಿನ್ನನ್ನು ಆಶೀರ್ವದಿಸಲಿ” ಎಂದು ಉತ್ತರಿಸಿದರು. 5ಆಗ ಬೋವಜನು ರೂತಳನ್ನು ನೋಡಿದನು, ಮತ್ತು ಮೇಲ್ವಿಚಾರಕನಿಗೆ, “ಆ ಸ್ತ್ರೀ ಯಾರಿಗೆ ಸೇರಿದವಳು?” ಎಂದು ಕೇಳಿದನು. 6ಮೇಲ್ವಿಚಾರಕನು ಉತ್ತರಿಸಿದ್ದೇನಂದರೆ, “ಅವಳು ನವೊಮಿಯ ಸಂಗಡ ಮೋವಾಬಿನಿಂದ ತಿರುಗಿ ಬಂದಿರುವ ಸ್ತ್ರೀ. 7ಅವಳು ನನಗೆ, ‘ಕೊಯ್ಯುವ ಪುರುಷರು ಹಿಂದೆ ಬಿಟ್ಟುಹೋಗುವ ಕಾಳುಗಳನ್ನು ಆಯ್ದುಕೊಳ್ಳಲು ದಯಮಾಡಿ ನನಗೆ ಅನುಮತಿಸು’ ಎಂದು ಕೇಳಿದಳು. ಅವಳು ಬೆಳಿಗ್ಗೆಯಿಂದ ಇಲ್ಲಿಯವರೆಗೂ ಕೆಲಸ ಮಾಡುತ್ತಿದ್ದಾಳೆ, ಈಗ ಅವಳು ಆಶ್ರಯ ಸ್ಥಾನದಲ್ಲಿ ಸ್ವಲ್ಪ ಮಾತ್ರ ವಿಶ್ರಮಿಸಿಕೊಂಡಳು.” 8ಆಗ ಬೋವಜನು ರೂತಳಿಗೆ ಹೇಳಿದ್ದೇನಂದರೆ, “ಸ್ತ್ರೀಯೇ, ನಾನು ಹೇಳುವುದನ್ನು ಕೇಳು. ನೀನು ಬೇರೆ ಯಾರ ಹೊಲಕ್ಕೂ ಅಥವಾ ನೀನು ಕಾಳುಗಳನ್ನು ಕೂಡಿಸಿಕೊಳ್ಳಲು ಬೇರೆ ಎಲ್ಲಿಗೂ ಹೋಗುವುದು ಅಗತ್ಯವಿಲ್ಲ. ನೀನು ನನ್ನ ಹೆಣ್ಣಾಳುಗಳ ಜೊತೆಗೆ ಇಲ್ಲಿಯೇ ಇರು. 9ಪುರುಷರು ಕೊಯ್ಯುವುದಕ್ಕೊಸ್ಕರ ಎಲ್ಲಿಗೆ ಹೋಗುತ್ತಾರೋ ನೋಡು, ಮತ್ತು ನನ್ನ ಹೆಣ್ಣಾಳುಗಳ ಜೊತೆ ಹಿಂದೆ ಹೋಗು. ನಿನಗೆ ತೊಂದರೆ ಕೊಡಬಾರದೆಂದು ನಾನು ಕೊಯ್ಯುವ ಪುರುಷರಿಗೆ ಹೇಳಿದ್ದೇನೆ. ನಿನಗೆ ನೀರಡಿಕೆ ಆಗುವಾಗ, ಹೋಗಿ ಪುರುಷರು ತುಂಬಿಸಿರುವ ಆ ಜಾಡಿಗಳಿಂದ ನೀರನ್ನು ತೆಗೆದುಕೊಂಡು ಕುಡಿ.” 10ಆಗ ಆಕೆಯು ಅವನ ಮುಂದೆ ಮೊಣಕಾಲೂರಿ, ತನ್ನ ಮುಖವನ್ನು ನೆಲಕ್ಕೆ ಬಾಗಿಸಿದಳು. ಅವಳು, “ನೀನು ನನಗೆ ಯಾಕೆ ಇಷ್ಟೊಂದು ಕರುಣೆ ತೋರಿಸುತ್ತಿದ್ದಿ? ನಾನು ಪರದೇಶದವಳು ಆದದ್ದರಿಂದ ನೀನು ನನ್ನನ್ನು ಗಮನಿಸುವಿ ಎಂದು ನಾನು ಯೋಚಿಸಿರಲಿಲ್ಲ!” ಎಂದು ಉದ್ಗರಿಸಿದಳು. 11ಬೋವಜನು ಉತ್ತರವಾಗಿ ಹೇಳಿದ್ದೇನಂದರೆ, “ನಿನ್ನ ಗಂಡನು ಸತ್ತ ಅಂದಿನಿಂದ ನೀನು ನಿನ್ನ ಅತ್ತೆಗೆ ಮಾಡಿದ್ದರ ಪ್ರತಿಯೊಂದು ವಿಷಯದ ಕುರಿತು ಜನರು ನನಗೆ ಹೇಳಿದರು. ನೀನು ನಿನ್ನ ತಂದೆತಾಯಿಗಳನ್ನು ಮತ್ತು ನಿನ್ನ ಸ್ವದೇಶವನ್ನು ಬಿಟ್ಟು, ಮತ್ತು ನಿನಗೆ ಮೊದಲು ಗೊತ್ತಿಲ್ಲದೆ ಇರುವ ಜನರ ಮಧ್ಯದಲ್ಲಿ ವಾಸಿಸಲು ಇಲ್ಲಿಗೆ ಬಂದಿರುವುದನ್ನು ಅವರು ನನಗೆ ಹೇಳಿದರು. 12ನೀನು ಮಾಡಿದ್ದಕ್ಕಾಗಿ ಆತನು ನಿನಗೆ ಪೂರ್ತಿಯಾಗಿ ತಿರುಗಿ ಕೊಡಲಿ ಎಂದು ನಾನು ಯೆಹೋವನನ್ನು ಪ್ರಾರ್ಥಿಸುತ್ತೇನೆ. ಹೌದು, ನಿನ್ನನ್ನು ಸಂರಕ್ಷಿಸಬೇಕೆಂದು ನೀನು ಭರವಸೆಯಿಟ್ಟಿರುವ ಇಸ್ರಾಯೇಲಿನ ದೇವರಾದ ಯೆಹೋವನು, ನಿನಗೆ ಪೂರ್ತಿಯಾಗಿ ಪ್ರತಿಫಲವನ್ನು ಕೊಡಲಿ.” 13ಅವಳು, “ಸ್ವಾಮಿ, ನಾನು ನಿನ್ನನ್ನು ಮೆಚ್ಚಿಸುವುದನ್ನು ಮುಂದುವರೆಸುವೆನೆಂದು ಭಾವಿಸುತ್ತೇನೆ. ನಾನು ನಿನ್ನ ಹೆಣ್ಣಾಳುಗಳಲ್ಲಿ ಒಬ್ಬಳಲ್ಲದಿದ್ದರೂ, ನೀನು ನಿನ್ನ ದಾಸಿಯಾದ ನನಗೆ ಕರುಣೆ ತೋರಿಸಿ ನನ್ನನ್ನು ಸಂತೈಸಿದ್ದಿ!” ಎಂದು ಉತ್ತರಿಸಿದಳು. 14ಊಟದ ಸಮಯವಾದಾಗ, ಬೋವಜನು ಆಕೆಗೆ, “ಇಲ್ಲಿಗೆ ಬಾ ಮತ್ತು ಸ್ವಲ್ಪ ಆಹಾರವನ್ನು ತೆಗೆದುಕೋ. ಈ ರೊಟ್ಟಿಯನ್ನು ತೆಗೆದುಕೋ ಮತ್ತು ಅದನ್ನು ಹುಳಿರಸದಲ್ಲಿ ಅದ್ದಿ ತಿನ್ನು” ಎಂದು ಹೇಳಿದನು. ಅನಂತರ ಅವಳು ಕೊಯ್ಯುವವರ ಜೊತೆಗೆ ಕುಳಿತುಕೊಂಡಾಗ, ಅವನು ಆಕೆಗೆ ಕೆಲವು ಸುಟ್ಟ ತೆನೆಗಳನ್ನು ಕೊಟ್ಟನು. ಅವಳು ತನಗೆ ಬೇಕಾದಷ್ಟು ತಿಂದಳು ಮತ್ತು ಅದರಲ್ಲಿ ಸ್ವಲ್ಪವನ್ನು ಉಳಿಸಿಕೊಂಡಳು. 15ಅನಂತರ ಅವಳು ಕೆಲಸಕ್ಕೆ ಹಿಂತಿರುಗಿ ಹೋಗುವುದಕ್ಕಾಗಿ ಎದ್ದು ನಿಂತಾಗ, ಬೋವಜನು ತನ್ನ ಕೆಲಸಗಾರರಿಗೆ ಆಜ್ಞಾಪಿಸಿದ್ದೇನಂದರೆ, “ಇವಳು ನೀವು ಕತ್ತರಿಸಿರುವ ಧಾನ್ಯಗಳ ಕಟ್ಟುಗಳ ಹತ್ತಿರವಿರುವ ಕೆಲವು ಕಾಳುಗಳನ್ನು ಕೂಡಿಸಿಕೊಂಡರೂ, ಅವಳನ್ನು ತಡೆಯಲು ಪ್ರಯತ್ನಿಸಬೇಡಿರಿ. 16ಅದಕ್ಕಿಂತ ಮಿಗಿಲಾಗಿ, ನೀವು ಕಟ್ಟುಗಳಿಂದ, ಸ್ವಲ್ಪ ತೆನೆಗಳ ದಂಟುಗಳನ್ನು ಕಿತ್ತುಹಾಕಿರಿ ಮತ್ತು ಆಕೆಯು ಅವುಗಳನ್ನು ಆರಿಸಿಕೊಳ್ಳುವುದಕ್ಕಾಗಿ ನೆಲದ ಮೇಲೆ ಬಿಟ್ಟುಬಿಡಿರಿ, ಮತ್ತು ಆಕೆಯನ್ನು ಬೈಯಬೇಡಿರಿ.” 17ಆದ್ದರಿಂದ ರೂತಳು ಹೊಲದಲ್ಲಿ ಕಾಳುಗಳನ್ನು ಸಾಯಂಕಾಲದ ವರೆಗೂ ಕೂಡಿಸಿಕೊಂಡಳು. ಅನಂತರ ದಂಟುಗಳಿಂದ ಕಾಳುಗಳನ್ನು ಬೇರೆ ಮಾಡಲು ಅವಳು ತಾನು ಕೂಡಿಸಿದ್ದ ಜವೆಗೋದಿಯನ್ನು ಬಡಿದಳು. ದೊಡ್ಡ ಬುಟ್ಟಿಯನ್ನು ತುಂಬುವಷ್ಟು ಜವೆಗೋದಿಯ ಕಾಳುಗಳು ಇದ್ದವು. 18ಅವಳು ಅದನ್ನು ಹೊತ್ತುಕೊಂಡು ಪಟ್ಟಣಕ್ಕೆ ಹಿಂತಿರುಗಿದಳು ಮತ್ತು ತಾನು ಎಷ್ಟೊಂದು ಕೂಡಿಸಿಕೊಂಡಿದ್ದೆನೆಂದು ತನ್ನ ಅತ್ತೆಗೆ ತೋರಿಸಿದಳು. ಅವಳು ಊಟದಲ್ಲಿ ಉಳಿಸಿಟ್ಟುಕೊಂಡಿದ್ದ ಸುಟ್ಟ ಕಾಳುಗಳನ್ನು ಸಹ ತನ್ನ ಅತ್ತೆಗೆ ಕೊಟ್ಟಳು. 19ಅವಳ ಅತ್ತೆಯು ಅವಳಿಗೆ, “ನೀನು ಇವತ್ತು ಈ ಎಲ್ಲಾ ಕಾಳುಗಳನ್ನು ಎಲ್ಲಿ ಕೂಡಿಸಿದೆ? ನೀನು ಯಾರ ಹೊಲದಲ್ಲಿ ಕೆಲಸ ಮಾಡಿದಿ? ನಿನಗೆ ದಯೆ ತೋರಿಸಿದ ಆ ಮನುಷ್ಯನನ್ನು ದೇವರು ಆಶೀರ್ವದಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಅಂದಳು. ಆಗ ರೂತಳು ತಾನು ಯಾರೊಂದಿಗೆ ಕೆಲಸ ಮಾಡಿದ್ದಳೋ ಆ ಮನುಷ್ಯನ ಬಗ್ಗೆ ಅವಳಿಗೆ ಹೇಳಿದಳು. ಅವಳು “ನಾನು ಇಂದು ಕೆಲಸ ಮಾಡಿದ ಹೊಲದ ಯಜಮಾನನ ಹೆಸರು ಬೋವಜ” ಅಂದಳು. 20ನವೊಮಿಯು ತನ್ನ ಸೊಸೆಗೆ, “ಯೆಹೋವನು ಅವನನ್ನು ಆಶೀರ್ವದಿಸಲಿ! ಇನ್ನೂ ಜೀವಿಸುತ್ತಿರುವ ನಮ್ಮೊಂದಿಗೂ, ಮತ್ತು ಸತ್ತು ಹೋದ ನಮ್ಮ ಗಂಡಂದಿರೊಂದಿಗೂ ನಂಬಿಗಸ್ತಿಕೆಯಿಂದ ಕಾರ್ಯಮಾಡುವುದನ್ನು ಯೆಹೋವನು ನಿಲ್ಲಿಸಲಿಲ್ಲ” ಅಂದಳು. ಅನಂತರ ಅವಳು “ಆ ಮನುಷ್ಯನು ಎಲೀಮೆಲೆಕನಿಗೆ ಹತ್ತಿರದ ಸಂಬಂಧಿಕನಾಗಿದ್ದಾನೆ, ವಾಸ್ತವವಾಗಿ, ಅವನು ನಮ್ಮ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಉಳ್ಳವರಲ್ಲಿ ಒಬ್ಬನಾಗಿದ್ದಾನೆ” ಎಂದು ಸಹ ಹೇಳಿದಳು. 21ಆಗ ಮೋವಾಬಿನ ಸ್ತ್ರೀಯಾದ ರೂತಳು, “ಅವನು ನನಗೆ, ‘ಅವರು ನನ್ನ ಎಲ್ಲಾ ಧಾನ್ಯಗಳನ್ನು ಪೂರ್ತಿಯಾಗಿ ಹೊಲದಿಂದ ತರುವ ವರೆಗೂ ನನ್ನ ಕೆಲಸಗಾರರ ಜೊತೆಯಲ್ಲೇ ಇರು ಎಂದು ಸಹ ಹೇಳಿದನು’” ಅಂದಳು. 22ನವೊಮಿಯು ತನ್ನ ಸೊಸೆಯಾದ ರೂತಳಿಗೆ, “ನನ್ನ ಮಗಳೇ, ಅವನ ಹೆಣ್ಣಾಳುಗಳ ಜೊತೆಗೆ ಅವನ ಹೊಲಕ್ಕೆ ಹೋಗುವುದು ನಿನಗೆ ಒಳ್ಳೆಯದು, ಯಾಕೆಂದರೆ ಒಂದುವೇಳೆ ನೀನು ಬೇರೆ ಯಾರಾದಾದರೂ ಹೊಲಕ್ಕೆ ಹೋದರೆ ಬಹುಶಃ ಯಾರಾದರೂ ನಿನಗೆ ತೊಂದರೆ ಕೊಡಬಹುದು” ಅಂದಳು. 23ಆದ್ದರಿಂದ ರೂತಳು ಬೋವಜನ ಹೆಣ್ಣಾಳುಗಳ ಜೊತೆಯಲ್ಲೇ ಕೆಲಸ ಮಾಡಿದಳು. ಕೆಲಸಗಾರರು ಜವೆಗೋದಿ ಮತ್ತು ಗೋದಿಯ ಕೊಯ್ಲು ಮಾಡುವುದನ್ನು ಮುಗಿಸುವ ವರೆಗೂ ಆಕೆಯು ಧಾನ್ಯದ ತೆನೆಗಳನ್ನು ಕೂಡಿಸಿಕೊಳ್ಳುತ್ತಿದ್ದಳು. ಆ ಸಮಯದಲ್ಲಿ, ಆಕೆಯು ನವೊಮಿಯ ಜೊತೆಯಲ್ಲಿಯೇ ವಾಸಿಸುತ್ತಿದ್ದಳು!
31ಒಂದು ದಿನ, ನವೊಮಿಯು ರೂತಳಿಗೆ ಹೇಳಿದ್ದೇನಂದರೆ, “ನನ್ನ ಮಗಳೇ, ನಾನು ನಿನಗೆ ಒಳ್ಳೆಯ ಗಂಡನಿರುವ ಸುರಕ್ಷಿತವಾದ ಮನೆಯನ್ನು ವ್ಯವಸ್ಥೆ ಮಾಡಬೇಕೆಂದು ಬಯಸುತ್ತೇನೆ. 2ಈಗ ನೀನು ಬೋವಜನ ಹೆಣ್ಣಾಳುಗಳ ಜೊತೆ ಕೆಲಸ ಮಾಡುತ್ತಿದ್ದಿಯಾ. ಅವನು ನಮ್ಮ ಹತ್ತಿರದ ಸಂಬಂಧಿ ಎಂದು ನಿನಗೆ ಗೊತ್ತು. ಆದ್ದರಿಂದ ಗಮನವಿಟ್ಟು ಕೇಳು. ಈ ರಾತ್ರಿ ಅವನು ಜವೆಗೋದಿಯನ್ನು ಒಕ್ಕುವ ಸ್ಥಳದಲ್ಲಿರುವನು. ಅವನು ಹೊಟ್ಟುಗಳಿಂದ ಕಾಳನ್ನು ಬೇರೆಮಾಡಲು ಅವುಗಳನ್ನು ತೂರುವನು. 3ನೀನು ಸ್ನಾನ ಮಾಡಿ, ಮತ್ತು ಸ್ವಲ್ಪ ಸುಗಂಧದ್ರವ್ಯ ಹಾಕಿಕೋ. ನಿನ್ನ ಮೇಲಂಗಿಯನ್ನು ಧರಿಸಿಕೋ. ಆಮೇಲೆ ಅವರು ಕಾಳುಗಳನ್ನು ಒಕ್ಕುವ ಸ್ಥಳಕ್ಕೆ ಇಳಿದು ಹೋಗು. ಆದರೆ ಅವನು ಊಟ ಮಾಡುವದನ್ನು ಮತ್ತು ಕುಡಿಯುವದನ್ನು ಮುಗಿಸುವ ವರೆಗೆ ನೀನು ಅಲ್ಲಿರುವದು ಅವನಿಗೆ ತಿಳಿಯುವದು ಬೇಡ. 4ಅವನು ನಿದ್ರೆ ಮಾಡುವುದಕ್ಕಾಗಿ ಮಲಗಿಕೊಳ್ಳುವಾಗ, ಅವನು ಎಲ್ಲಿ ಮಲಗುತ್ತಾನೆ ಎಂಬುದನ್ನು ಗಮನಿಸು. ಆಮೇಲೆ ಅವನ ಬಳಿಗೆ ಹೋಗು, ಅವನ ಪಾದಗಳ ಮೇಲಿನ ಹೊದಿಕೆಯನ್ನು ತೆರೆದು, ಮತ್ತು ಅಲ್ಲಿ ಮಲಗು. ಅವನು ಎದ್ದಾಗ ನೀನು ಏನು ಮಾಡಬೇಕೆಂಬುದನ್ನು ಅವನು ನಿನಗೆ ಹೇಳುವನು.” 5ರೂತಳು ಉತ್ತರವಾಗಿ ಹೇಳಿದ್ದೇನಂದರೆ, “ನೀನು ನನಗೆ ಮಾಡಲು ಹೇಳಿದ ಎಲ್ಲವನ್ನು ನಾನು ಮಾಡುತ್ತೇನೆ.” 6ಆದ್ದರಿಂದ ಅವಳು ಕಾಳನ್ನು ಒಕ್ಕುವ ಸ್ಥಳಕ್ಕೆ ಇಳಿದು ಹೋದಳು. ಅಲ್ಲಿ ಆಕೆ ತನ್ನ ಅತ್ತೆ ಮಾಡಬೇಕೆಂದು ಹೇಳಿದ ಎಲ್ಲವನ್ನು ಮಾಡಿದಳು. 7ಬೋವಜನು ಊಟ ಮಾಡುವದನ್ನು ಮತ್ತು ಕುಡಿಯುವದನ್ನು ಮುಗಿಸಿದಾಗ, ಅವನಿಗೆ ಹಿತವೆನಿಸಿತು. ಅವನು ಕಾಳಿನ ರಾಶಿಯ ಕೊನೆಯಲ್ಲಿ ದೂರ ಹೋಗಿ, ಅಲ್ಲಿ ಮಲಗಿ ನಿದ್ರೆ ಮಾಡಿದನು. ಆಮೇಲೆ ರೂತಳು ಗುಟ್ಟಾಗಿ ಅವನ ಹತ್ತಿರ ಬಂದಳು. ಅವಳು ಅವನ ಕಾಲಿನ ಹೊದಿಕೆಯನ್ನು ತೆಗೆದುಬಿಟ್ಟಳು ಮತ್ತು ಅಲ್ಲಿ ಮಲಗಿದಳು. 8ಮಧ್ಯರಾತ್ರಿಯಲ್ಲಿ ಅವನು ಇದ್ದಕ್ಕಿದ್ದಂತೆ ಎದ್ದನು. ಅವನು ಕುಳಿತುಕೊಂಡನು ಮತ್ತು ಒಬ್ಬ ಸ್ತ್ರೀ ತನ್ನ ಪಾದಗಳ ಬಳಿಯಲ್ಲಿ ಮಲಗಿದ್ದಾಳೆಂದು ತಿಳಿದುಕೊಂಡನು. 9ಅವನು ಆಕೆಗೆ, “ನೀನು ಯಾರು” ಎಂದು ಕೇಳಿದನು. ಆಕೆ ಉತ್ತರಿಸಿ, “ನಾನು ನಿನ್ನ ದಾಸಿಯಾದ ರೂತಳು. ನೀನು ನನ್ನ ಸತ್ತ ಗಂಡನ ಕುಟುಂಬವನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿಯುಳ್ಳವನಾಗಿರುವುದರಿಂದ, ನನ್ನನ್ನು ಮದುವೆಯಾಗುವ ಮೂಲಕ ನನ್ನನ್ನು ಸುರಕ್ಷಿತಗೊಳಿಸು” ಎಂದಳು. 10ಬೋವಜನು ಉತ್ತರಿಸಿ ಹೇಳಿದ್ದೇನಂದರೆ, “ನನ್ನ ಪ್ರಿಯಳೇ! ಯೆಹೋವನು ನಿನ್ನನ್ನು ಆಶೀರ್ವದಿಸಲಿ! ನೀನು ಮೊದಲು ನಿನ್ನ ಅತ್ತೆಗೆ ನಂಬಿಗಸ್ತಳಾಗಿದ್ದಿ, ಆದರೆ ಈಗ ಮದುವೆ ಮಾಡಿಕೊಳ್ಳಲು ಶ್ರೀಮಂತನಾಗಲಿ ಅಥವಾ ಬಡವನಾಗಲಿ ಆಗಿರುವ ಯೌವನಸ್ಥನ ಹಿಂದೆ ಹೋಗದೆ ಇನ್ನೂ ಹೆಚ್ಚಾಗಿ ನಂಬಿಗಸ್ತಿಕೆಯಿಂದ ನಡೆದುಕೊಳ್ಳುತ್ತಾ ಇದ್ದೀ. 11ಈಗ ನನ್ನ ಪ್ರಿಯಳೇ, ನೀನು ಕೇಳಿಕೊಳ್ಳುವದನ್ನೆಲ್ಲಾ ನಾನು ಮಾಡುತ್ತೇನೆ. ಹೆದರಬೇಡ, ಯಾಕೆಂದರೆ ಈ ಪಟ್ಟಣದಲ್ಲಿರುವ ಎಲ್ಲಾ ಜನರು ನೀನು ಮಾನಸ್ಥಳಾದ ಸ್ತ್ರೀ ಎಂದು ಬಲ್ಲರು. 12ಆದರೆ, ನಾನು ನವೊಮಿಯ ಹತ್ತಿರ ಸಂಬಂಧಿಕರಲ್ಲಿ ಒಬ್ಬನು ಆಗಿದ್ದೇನೆ, ಆದ್ದರಿಂದ ನಾನು ನಿಮ್ಮಿಬ್ಬರ ಜವಾಬ್ದಾರಿಯುಳ್ಳವನಾಗಿದ್ದೇನೆ, ನನಗಿಂತಲೂ ಹೆಚ್ಚು ಜವಾಬ್ದಾರಿಯುಳ್ಳ ಇನ್ನೊಬ್ಬ ವ್ಯಕ್ತಿ ಇದ್ದಾನೆ ಏಕೆಂದರೆ ಅವನು ನವೊಮಿಗೆ ತುಂಬಾ ಹತ್ತಿರದ ಸಂಬಂಧಿಕನಾಗಿದ್ದಾನೆ. 13ನೀನು ರಾತ್ರಿಯೆಲ್ಲಾ ಇಲ್ಲಿಯೇ ಇರು. ನಾಳೆ ಬೆಳಿಗ್ಗೆ ನಿನ್ನ ಬಗ್ಗೆ ಈ ಮನುಷ್ಯನಿಗೆ ನಾನು ಹೇಳುತ್ತೇನೆ. ಒಂದುವೇಳೆ ಅವನು ನಿನ್ನ ಜವಾಬ್ದಾರಿಯನ್ನು ತೆಗೆದುಕೊಳ್ಳುವೆನು ಎಂದು ಹೇಳಿದರೆ ಒಳ್ಳೆಯದು, ಅವನು ನಿನ್ನನ್ನು ಮದುವೆಯಾಗಲಿ. ಆದರೆ ಒಂದುವೇಳೆ ಅವನು ನಿನ್ನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಒಪ್ಪದಿದ್ದರೆ, ಯೆಹೋವನು ಜೀವಿಸುವುದು ಎಷ್ಟು ನಿಶ್ಚಯವೋ ಅಷ್ಟೇ ನಿಶ್ಚಯವಾಗಿ ನಾನು ನಿನ್ನನ್ನು ಮದುವೆಯಾಗಿ ನಿನ್ನನ್ನು ನೋಡಿಕೊಳ್ಳುತ್ತೆನೆಂದು ಪ್ರಮಾಣ ಮಾಡುತ್ತೇನೆ. ಆದ್ದರಿಂದ ಬೆಳಗಿನವರೆಗೆ ಇಲ್ಲೇ ಇರು.” 14ಆಗ ಬೋವಜನು, “ಒಬ್ಬ ಸ್ತ್ರೀಯು ಇಲ್ಲಿಗೆ ಬಂದಿದ್ದಳು ಎಂದು ಯಾರಿಗೂ ಗೊತ್ತಾಗದಿರುವುದೇ ಒಳ್ಳೆಯದು” ಎಂದು ಸಹ ಹೇಳಿದ್ದನು. ಆದ್ದರಿಂದ ಆಕೆಯು ಬೆಳಗಿನವರೆಗೆ ಆತನ ಪಾದಗಳ ಬಳಿ ಮಲಗಿದಳು, ಮತ್ತು ಜನರು ಆಕೆಯನ್ನು ಗುರುತಿಸುವುದಕ್ಕೆ ಆಗುವಷ್ಟು ಬೆಳಗಾಗುವ ಮೊದಲೇ ಹೋಗುವುದಕ್ಕೆ ಎದ್ದಳು. 15ಆಗ ಬೋವಜನು ಆಕೆಗೆ, “ನಿನ್ನ ಹೊದಿಕೆಯನ್ನು ಇಲ್ಲಿಗೆ ತೆಗೆದುಕೊಂಡು ಬಾ ಮತ್ತು ಅದನ್ನು ಹಿಡಿ” ಅಂದನು. ಆಕೆ ಅದನ್ನು ಮಾಡಿದಾಗ, ಅವನು ಅದಕ್ಕೆ ಯಥೇಚ್ಛವಾಗಿ ಜವೆಗೋದಿಯನ್ನು ಹಾಕಿದನು ಮತ್ತು ಅವಳ ಮೇಲೆ ಹೊರಿಸಿದನು. ಆಗ ಅವನು ಊರೊಳಕ್ಕೆ ಹೋದನು. 16ರೂತಳು ಮನೆಗೆ ಬಂದಾಗ, ಆಕೆಯ ಅತ್ತೆಯು ಆಕೆಗೆ, “ನನ್ನ ಮಗಳೇ ಇದು ನೀನೇನಾ?” ಎಂದು ಕೇಳಿದಳು. ಆಗ ರೂತಳು ಬೋವಜನು ತನಗಾಗಿ ಮಾಡಿದೆಲ್ಲವನ್ನು ಮತ್ತು ಹೇಳಿದ್ದೆಲ್ಲವನ್ನು ಆಕೆಗೆ ಹೇಳಿದಳು. 17ಮತ್ತೂ ಆಕೆ ನವೂಮಿಗೆ, “ಅವನು ನನಗೆ ಈ ಜವೆಗೋದಿಯನೆಲ್ಲಾ ಕೊಟ್ಟು, ‘ನಿನ್ನ ಅತ್ತೆಯ ಬಳಿಗೆ ಬರಿಗೈಯಿಂದ ಹಿಂತಿರುಗುವುದನ್ನು ನಾನು ಬಯಸುವದಿಲ್ಲ’ ಅಂದನು” ಎಂದು ಹೇಳಿದಳು. 18ಆಗ ನವೊಮಿ, “ನನ್ನ ಮಗಳೇ, ಏನಾಗುವದೆಂದು ನೋಡುವ ತನಕ ಇಲ್ಲಿ ಕಾದಿರು. ಆ ಮನುಷ್ಯನು ಇವತ್ತು ಖಂಡಿತವಾಗಿಯೂ ಅದನ್ನು ಬಗೆಹರಿಸುವನು” ಅಂದಳು.
41ಅಷ್ಟರಲ್ಲಿ, ಬೋವಜನು ಊರು ಬಾಗಿಲಿನ ಒಳಗೆ, ಜನರು ಅಧಿಕಾರ ವ್ಯವಹಾರಗಳನ್ನು ನಡೆಸುವ ಸ್ಥಳಕ್ಕೆ ಹೋದನು. ಅವನು ಅಲ್ಲಿ ಕುಳಿತುಕೊಂಡನು. ಬೋವಜನು ಹೇಳಿದ್ದ ಹತ್ತಿರದ ಸಂಬಂಧಿಕನು ಸ್ವಲ್ಪ ಹೊತ್ತಲ್ಲೆ ಅಲ್ಲಿಗೆ ನಡೆದು ಬಂದನು. ಬೋವಜನು ಅವನ ಹೆಸರಿಡಿದು ಕರೆದು, ಅವನಿಗೆ, “ಇಲ್ಲಿ ಬಂದು ಕುಳಿತುಕೋ” ಅಂದನು. ಆದ್ದರಿಂದ ಆ ಮನುಷ್ಯನು ಬಂದನು ಮತ್ತು ಕುಳಿತುಕೊಂಡನು. 2ಆಗ ಬೋವಜನು ಊರಿನ ಹತ್ತು ಮಂದಿ ಹಿರಿಯರನ್ನು, ಮಾನಸ್ಥರಾದ ಮನುಷ್ಯರನ್ನು ಸೇರಿಸಿಕೊಂಡನು, ಮತ್ತು ಅವರಿಗೆ, “ನಮ್ಮ ವ್ಯವಹಾರಕ್ಕೆ ಸಾಕ್ಷಿಯಾಗಿರುವಂತೆ ದಯಮಾಡಿ ಇಲ್ಲಿ ಕುಳಿತುಕೊಳ್ಳಿರಿ” ಅಂದನು. ಆದ್ದರಿಂದ ಅವರು ಕುಳಿತುಕೊಂಡರು. 3ಆಗ ಬೋವಜನು ತನ್ನ ಸಂಬಂಧಿಕನಿಗೆ ಹೇಳಿದ್ದೇನಂದರೆ, “ನಮ್ಮ ಸಂಬಂಧಿಕನಾದ ಎಲಿಮೆಲೇಕನಿಗೆ ಸೇರಿದ ಹೊಲವನ್ನು ಮಾರುತ್ತಿದ್ದಾರೆ ಎಂದು ನಿನಗೆ ಗೊತ್ತಾ? ಮೋವಾಬಿನಿಂದ ಹಿಂತಿರುಗಿ ಬಂದಿರುವ ನವೊಮಿಯು ಅದನ್ನು ಮಾರುತ್ತಿದ್ದಾಳೆ. 4ಸಾಕ್ಷಿಯಾಗಿರುವುದಕ್ಕೆ ಒಪ್ಪಿಕೊಂಡಿರುವ ಈ ಗೌರವಾನ್ವಿತ ಮನುಷ್ಯರ ಮುಂದೆ ಇಲ್ಲಿ ನೀನು ಅದನ್ನು ಸ್ವಾಧೀನಮಾಡಿಕೊಳ್ಳಬಹುದೆಂದು ನಾನು ನಿನಗೆ ಹೇಳಬೇಕು ಎಂದು ನಾನು ಭಾವಿಸಿದೆನು. ನೀನು ಅದನ್ನು ಕುಟುಂಬಕ್ಕಾಗಿ ಪುನಃ ಕೊಂಡುಕೊಳ್ಳಲು ಬಯಸಿದರೆ, ಹಾಗೆ ಮಾಡು. ನೀನು ಅದನ್ನು ಪುನಃ ಕೊಂಡುಕೊಳ್ಳಲು ಬಯಸದಿದ್ದರೆ, ಆಗ ನನಗೆ ತಿಳಿಸು, ಯಾಕೆಂದರೆ ನೀನು ಎಲೀಮೆಲೆಕನಿಗೆ ಬಹು ಹತ್ತಿರದ ಸಂಬಂಧಿಕನಾಗಿದ್ದಿ, ಮತ್ತು ನಿನ್ನ ನಂತರ ನಾನಿದ್ದೇನೆ.” ಆ ಮನುಷ್ಯನು ಉತ್ತರಿಸಿ, “ನಾನು ಅದನ್ನು ತೆಗೆದುಕೊಳ್ಳುತ್ತೇನೆ” ಎಂದನು! 5ಆಗ ಬೋವಜನು ಅವನಿಗೆ, “ನೀನು ನವೊಮಿಯಿಂದ ಭೂಮಿಯನ್ನು ಕೊಂಡುಕೊಳ್ಳುವಾಗ, ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಸತ್ತ ಆಕೆಯ ಗಂಡನ ಹೆಸರನ್ನು ಉಳಿಸಿಕೊಂಡು ಹೋಗಲು ಆಕೆಯು ಒಬ್ಬ ಮಗನನ್ನು ಪಡೆಯುವ ಸಲುವಾಗಿ ಮೊವಾಬಿನಿಂದ ಬಂದಿರುವ ನಮ್ಮ ಸಂಬಂಧಿಕನ ವಿಧವೆಯಾದ ರೂತಳನ್ನು ಸಹ ನೀನು ಮದುವೆಯಾಗಬೇಕು” ಅಂದನು. 6ಆಗ ಹತ್ತಿರದ ಸಂಬಂಧಿಕನು, “ಹಾಗಾದರೆ, ನನಗೆ ಅದನ್ನು ತಿರಿಗಿ ಕೊಂಡುಕೊಳ್ಳಲು ಆಗುವುದಿಲ್ಲ. ನಾನು ಅದನ್ನು ಮಾಡಿದರೆ, ನನ್ನ ಸ್ವಂತ ಪುತ್ರರ ಬಾಧ್ಯತೆಯನ್ನು ನಾನು ಹಾಳುಮಾಡಿದಂತಾಗುತ್ತದೆ. ನನ್ನ ಸ್ಥಾನದಲ್ಲಿ, ನೀನೇ ಹೊಲಕ್ಕೆ ಮತ್ತು ಸ್ತ್ರೀಗೆ ಜವಾಬ್ದಾರಿಯಾಗಿರು. ನನ್ನಿಂದ ಅದನ್ನು ಮಾಡಲು ಆಗುವುದಿಲ್ಲ” ಅಂದನು. 7(ಆ ಸಮಯದಲ್ಲಿ, ಇಸಾಯೇಲಿನಲ್ಲಿ, ಇಬ್ಬರು ವ್ಯಕ್ತಿಗಳು ತಮ್ಮ ಮಧ್ಯೆ ಏನಾದರೂ ವಿಮೋಚಿಸಲು ಅಥವಾ ವಿನಿಮಯ ಮಾಡಿಕೊಳ್ಳಲು ಒಪ್ಪಿದರೆ, ಒಬ್ಬ ವ್ಯಕ್ತಿಯು ತನ್ನ ಒಂದು ಪಾದರಕ್ಷೆಯನ್ನು ಬಿಚ್ಚಿ, ಮತ್ತು ಅದನ್ನು ಇನ್ನೊಬ್ಬ ವ್ಯಕ್ತಿಗೆ ಕೊಡುವುದು ಪದ್ಧತಿಯಾಗಿತ್ತು. ಆ ರೀತಿಯಾಗಿ ಇಸ್ರಾಯೇಲಿನಲ್ಲಿ ವ್ಯವಹಾರವನ್ನು ಮಾಡಿ ಮುಗಿಸುತ್ತಿದ್ದರು.) 8ಆದ್ದರಿಂದ ಸಂಬಂಧಿಕನು ಬೋವಜನಿಗೆ, “ನೀನೇ ಹೊಲವನ್ನು ಕೊಂಡುಕೋ” ಅಂದನು! ಮತ್ತು ತನ್ನ ಒಂದು ಪಾದರಕ್ಷೆಯನ್ನು ಬಿಚ್ಚಿ ಮತ್ತು ಬೋವಜನಿಗೆ ಕೊಟ್ಟನು. 9ಆಗ ಬೋವಜನು ಗೌರವಾನ್ವಿತರಾದ ಮನುಷ್ಯರಿಗೆ ಮತ್ತು ಅಲ್ಲಿರುವ ಇತರ ಎಲ್ಲಾ ಜನರಿಗೆ ಹೇಳಿದ್ದೇನಂದರೆ, “ಇವತ್ತು ನಾನು ನವೊಮಿಯಿಂದ ಎಲೀಮೆಲೇಕ, ಮಹ್ಲೋನ್, ಕಿಲ್ಯೋನರಿಗೆ ಸಂಬಂಧಪಟ್ಟ ಎಲ್ಲಾ ಆಸ್ತಿಯನ್ನು ಕೊಂಡುಕೊಂಡಿದ್ದೇನೆ ಎಂದು ನೀವೆಲ್ಲರೂ ನೋಡಿದ್ದೀರಿ. 10ಮೋವಾಬಿನಿಂದ ಬಂದಿರುವ ಮಹ್ಲೋನನ ವಿಧವೆಯಾದ ರೂತಳನ್ನು ಸಹ ನಾನು ನನ್ನ ಹೆಂಡತಿಯಾಗಿ ತೆಗೆದುಕೊಳ್ಳುತ್ತಿದ್ದೇನೆ. ಇದು ಏಕೆಂದರೆ ಆಕೆಯು ಒಬ್ಬ ಮಗನಿಗೆ ಜನ್ಮ ಕೊಡಬೇಕೆಂಬ, ಆ ಮಗುವನ್ನು ಮಹ್ಲೋನನ ಮಗ ಎಂದು ಪರಿಗಣಿಸಬೇಕೆಂಬ ಸಲುವಾಗಿಯೇ. ಅವನು ಆಸ್ತಿಯನ್ನು ಬಾಧ್ಯವಾಗಿ ಪಡೆದುಕೊಳ್ಳುವನು ಮತ್ತು ಕುಟುಂಬದ ಹೆಸರನ್ನು, ಅವನ ಸಂಬಂಧಿಕರ ಮಧ್ಯದಲ್ಲಿ ಮತ್ತು ಇಲ್ಲಿ ಅವನ ಸ್ವಂತ ಊರಿನಲ್ಲಿ ಉಳಿಸಿಕೊಂಡು ಹೋಗುವನು. ಈ ದಿನ ನೀವು ಈ ಸಂಗತಿಗಳನ್ನು ನೋಡಿದ್ದೀರಿ ಮತ್ತು ಕೇಳಿದ್ದೀರಿ, ಮತ್ತು ಅವುಗಳ ಕುರಿತು ಕೇಳುವ ಯಾರಿಗಾದರೂ ಅವುಗಳ ಬಗ್ಗೆ ಹೇಳಬಹುದು.” 11ಊರ ಬಾಗಿಲ ಬಳಿಯಲ್ಲಿ ಕುಳಿತ್ತಿದ್ದ ಎಲ್ಲಾ ಗೌರವಾನ್ವಿತರು ಮತ್ತು ಇತರರು ಒಪ್ಪಿಕೊಂಡು ಹೇಳಿದ್ದೇನಂದರೆ, “ಹೌದು, ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ನಿನ್ನ ಮನೆಗೆ ಬರುವ ಈ ಸ್ತ್ರೀಯನ್ನು ಯೆಹೋವನು ರಾಹೇಲ ಮತ್ತು ಲೇಯ ಹಾಗೆ ಇರುವಂತೆ ಅನುಗ್ರಹಿಸಲಿ ಎಂದು ನಾವು ಪ್ರಾರ್ಥಿಸುತ್ತೇವೆ, ಆ ಇಬ್ಬರು ನಮ್ಮ ಪೂರ್ವಜರನ್ನು ಹೆತ್ತರು ಮತ್ತು ನಮ್ಮ ಇಸ್ರಾಯೇಲ್ ಜನಾಂಗವನ್ನು ಪ್ರಾರಂಭಿಸಿದರು. ನೀನು ಎಫ್ರಾತ್ ಕುಲದಲ್ಲಿ ಶ್ರೀಮಂತನಾಗು ಮತ್ತು ಇಲ್ಲಿ ಬೇತ್ಲೆಹೇಮಿನಲ್ಲಿ ಹೆಸರುವಾಸಿಯಾಗು ಎಂದು ನಾವು ಬಯಸುತ್ತೇವೆ. 12ನಿನ್ನ ಕುಟುಂಬವು ನಿನ್ನ ಪೂರ್ವಜರಾದ ಯೆಹೂದ ಮತ್ತು ತಾಮಾರಳ ಮಗನಾದ ಪೇರೆಚನ ಕುಟುಂಬದ ಹಾಗೆ ಆಗಲಿ ಎಂದು ನಾವು ಪ್ರಾರ್ಥಿಸುತ್ತವೆ, ಯಾಕೆಂದರೆ ಯೆಹೋವನು ನಿನಗೂ ಮತ್ತು ಈ ಸ್ತ್ರೀಗೂ ಅನೇಕ ಸಂತತಿಗಳನ್ನು ಕೊಡುವನು.” 13ಆದ್ದರಿಂದ ಬೋವಜನು ರೂತಳನ್ನು ತನ್ನ ಹೆಂಡತಿಯನ್ನಾಗಿ ತೆಗೆದುಕೊಂಡನು ಮತ್ತು ಆಕೆಯೊಂದಿಗೆ ಸಂಭೋಗ ಮಾಡಿದನು. ಯೆಹೋವನು ಆಕೆ ಗರ್ಭಿಣಿಯಾಗುವಂತೆ ಮಾಡಿದನು, ಮತ್ತು ಆಕೆ ಒಬ್ಬ ಮಗನನ್ನು ಹೆತ್ತಳು. 14ಬೇತ್ಲೆಹೇಮಿನ ಸ್ತ್ರೀಯರು ನವೊಮಿಗೆ ಹೇಳಿದ್ದೇನಂದರೆ, “ಇವತ್ತು ನಿನ್ನ ಕುಟುಂಬವನ್ನು ಕಾಪಾಡುವುದಕ್ಕಾಗಿ ಒಬ್ಬ ಮನುಷ್ಯನನ್ನು ನಿನಗೆ ಕೊಟ್ಟಿದ್ದಕ್ಕಾಗಿ ಯೆಹೋವನಿಗೆ ಸ್ತ್ರೋತ್ರವಾಗಲಿ. ಇಸ್ರಾಯೇಲಿನ ಆದ್ಯಂತವಾಗಿ ಜನರು ಅವನ ಹೆಸರನ್ನು ತಿಳಿದುಕೊಳ್ಳಲಿ ಎಂದು ನಾವು ಬಯಸುತ್ತೇವೆ. 15ನಿನಗೆ ಏಳು ಮಂದಿ ಗಂಡು ಮಕ್ಕಳಿದ್ದರೂ ಅವರಿಗಿಂತಲೂ ಉತ್ತಮಳಾಗಿರುವ ಮತ್ತು ನಿನ್ನನ್ನು ಪ್ರೀತಿಸುವ ನಿನ್ನ ಸೊಸೆಯು ಅವನನ್ನು ಹೆತ್ತಿದ್ದಾಳೆ. ಆದ್ದರಿಂದ ನೀನು ತಿರುಗಿ ಯೌವನವನ್ನು ಅನುಭವಿಸುವಂತೆ ಅವನು ಮಾಡುವನು, ಮತ್ತು ನಿನಗೆ ವಯಸ್ಸಾದಾಗ ಅವನು ನಿನ್ನನ್ನು ನೋಡಿಕೊಳ್ಳುವನು.” 16ಆಗ ನವೊಮಿಯು ಮಗುವನ್ನು ಎತ್ತಿಕೊಂಡಳು ಮತ್ತು ಹತ್ತಿರ ಇಟ್ಟುಕೊಂಡಳು, ಮತ್ತು ಅವನಿಗೆ ಎರಡನೆಯ ತಾಯಿಯಾದಳು. 17ಸಮೀಪದಲ್ಲಿ ವಾಸಿಸುತ್ತಿದ್ದ ಸ್ತ್ರೀಯರು, “ಈಗ ನವೊಮಿಗೆ ಒಬ್ಬ ಮಗನು ಇದ್ದಂತೆ ಆಗಿದೆ!” ಅಂದರು. ಅವರು ಅವನಿಗೆ ಓಬೇದ ಎಂದು ಹೆಸರಿಟ್ಟರು. ಅನಂತರ ದಾವೀದನಿಗೆ ತಂದೆಯಾದ ಇಷಯನಿಗೆ ಓಬೇದನು ತಂದೆಯಾದನು. 18ಪೆರೆಚನ ವಂಶಾವಳಿಯು ಇಲ್ಲಿದೆ: ಪೆರೆಚನ ಮಗ ಹೆಚ್ರೋನ. 19ಹೆಚ್ರೋನನ ಮಗ ರಾಮ. ರಾಮನ ಮಗ ಅಮ್ಮೀನಾದಾಬನು. 20ಅಮ್ಮೀನಾದಾಬನ ಮಗ ನಹಶೋನ. ನಹಶೋನನ ಮಗ ಸಲ್ಲೋನ. 21ಸಲ್ಲೋನನ ಮಗ ಬೋವಜ. ಬೋವಜನ ಮಗ ಓಬೇದ. 22ಓಬೇದನ ಮಗ ಇಷಯ. ಇಷಯನ ಮಗ ದಾವೀದ.